ಎಕ್‍ಹಾರ್ಡ್
	(? - 973). ಕ್ರಿ.ಶ. ಹತ್ತನೆಯ ಶತಮಾನದಲ್ಲಿ ಸ್ಯಾಕ್ಸನ್ ಚಕ್ರವರ್ತಿಗಳ ಕಾಲದ ಅತಿ ಪ್ರಮುಖ ಕವಿ. ಸೇಂಟ್ ಗಾಲನ ಮಠದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಕ್ರಿ.ಶ.935 ರಲ್ಲಿ ಲ್ಯಾಟಿನ್ ಭಾಷೆಯಲ್ಲಿ ವಾಲ್ಟೇರಿಯಸ್ ಮನುಪ್ಲೇರ್ಟಿಸ್-ಎಂದರೆ ವಾಲ್ಟರನ ಕಥೆಯ ಮಹಾಕಾವ್ಯವೊಂದನ್ನು ರಚಿಸಿದ. ವರ್ಜಿಲನ ಈನಿಯಡ್ ಮತ್ತು ಇತರ ಲ್ಯಾಟಿನ್ ಕವಿಗಳ ಕೃತಿಗಳನ್ನು ಮಾದರಿಯಾಗಿಟ್ಟುಕೊಂಡಿದ್ದರೂ ವಾಲ್ಟೇರಿಯಸ್ ಮಹಾಕಾವ್ಯದಲ್ಲಿ ಜರ್ಮನ್ ಜನರ ವ್ಯಕ್ತಿತ್ವ, ವೀರನಿಟ್ಟು ಎದ್ದುಕಾಣುತ್ತದೆ. ಲ್ಯಾಟಿನ್ ಹೆಕ್ಸಮೀಟರಿನ ಛಂದಸ್ಸಿನಲ್ಲಿ ಬರೆದ ಈ ಕಾವ್ಯದ ವಸ್ತು ಜರ್ಮನಿಯಲ್ಲಿ ಪ್ರಚಲಿತವಾಗಿದ್ದ ಆಕ್ವಿಟೇನಿನ ವಾಲ್ಟರನ ಪುರಾಣ ಕಥೆ. ಸಂಚಾರೀಗಾಯಕರು ಹಾಡುತ್ತಿದ್ದ ಸಣ್ಣದೊಂದು ಕಥನಕವನ ಈ ಕೃತಿಗೆ ಸ್ಫೂರ್ತಿಕೊಟ್ಟಿತು. ವಾಲ್ಟರ್ ಮತ್ತು ಆತನ ವಧು ಹಿಲ್ಡೆಗುಂಡ್ ಇವರು ಹೂಣರ ದೆಸೆಯಿಂದ ತಪ್ಪಿಸಿಕೊಂಡು ಬಂದ ಅನಂತರದ ರೋಮಾಂಚಕ ಕಥೆಯಲ್ಲಿ ವಾಲ್ಟರನ ಶೌರ್ಯ, ಅವನ ಶತ್ರುಗಳಾದ ಹೇಗೆನ್, ಗಂಥರ್ ಇವರ ಕ್ರೌರ್ಯ, ಸ್ವಾರ್ಥ ಮತು ವಾಲ್ಟರನ ಪ್ರೇಯಿಸಿ ಹಿಲ್ಡೆಗುಂಡ್ ತೋರಿಸುವ ಸ್ಥಿರತೆ ಇವುಗಳ ಸುಂದರ ಚಿತ್ರಣವಿದೆ. ಈ ವೀರಗಾಥೆಯಲ್ಲಿ ವಿಸ್ತಾರವಾದ ಯುದ್ಧವರ್ಣನೆಯೇ ಅಲ್ಲದೆ ನಿಸರ್ಗದ ಚೆಲುವಿನ ಚಿತ್ರಣವೂ ತುಂಬಿಕೊಂಡಿದೆ. ಮಾನವೀಯತೆಯ ಆಳವಾದ ಬಣ್ಣವಿರುವ ಸನ್ನಿವೇಶಗಳೂ ಹೃದಯ ಕಲಕುವಂತ ಭಾವೋದ್ರೇಕದ ಘಟನೆಗಳೂ ಬಹಳ ನಯವಾಗಿ ಚಿತ್ರಿತವಾಗಿವೆ. ಸಾಮಾನ್ಯ ಜನರ ಕಲ್ಪನೆಯ ಆದರ್ಶ ವ್ಯಕ್ತಿಗಳಿಗೆ ಜೀವಂತ ಮನುಷ್ಯರ ಸತ್ತ್ವವನ್ನು ಕವಿ ಈ ವೀರಗಾಥೆಯಲ್ಲಿ ಕೊಟ್ಟಿದ್ದಾನೆ. ಲ್ಯಾಟಿನ್ ಕವಚವಿದ್ದರೂ ಜರ್ಮನ್ ವ್ಯಕ್ತಿತ್ವವೇ ಹೃದಯವಾಗಿರುವ ಈ ಮಹಾಕಾವ್ಯ ನಿಜವಾಗಿ ಜರ್ಮನ್ ವೀರಗಾಥೆಯೇ. ಎಕ್‍ಹಾರ್ಡ್ ಬಳಸಿದ ಭಾಷೆ ಆ ಕಾಲದಲ್ಲಿ ಜನ ಆಡುತ್ತಿದ್ದ ಗಟ್ಟಿಗಡುಸಾದ ಲ್ಯಾಟಿನ್. ಈತನ ತೀರಿಕೊಂಡ 100ವರ್ಷದ ಅನಂತರ ಮತ್ತೊಬ್ಬ ನಾಲ್ಕನೆಯ ಎಕ್‍ಹಾರ್ಡ್ ಎಂಬಾತ ವಾಲ್ಟೇರಿಯಸ್ ಕಾವ್ಯವನ್ನು ತಿದ್ದಿ, ಅದರ ಲ್ಯಾಟಿನ್ ಭಾಷೆಯನ್ನು ಉತ್ತಮಗೊಳಿಸಲು, ಗ್ರಂಥಸ್ಥವಾಗಿಸಲು ಪ್ರಯತ್ನಿಸಿ ವಿಫಲನಾದ. ಎಕ್‍ಹಾರ್ಡ್‍ನ ಬಗ್ಗೆ ಹತ್ತೊಂಬತ್ತನೆಯ ಶತಮಾನದಲ್ಲಿ ಒಂದು ಕಾದಂಬರಿಯೂ ಇಪ್ಪತ್ತನೆಯ ಶತಮಾನದಲ್ಲಿ ಒಂದು ನಾಟಕವೂ ರಚಿತವಾಗಿವೆ.	
		(ಎಸ್.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ